Translate

ಶನಿವಾರ, ಅಕ್ಟೋಬರ್ 28, 2017

ರಂಗದ ರಾಜ

ವಿದಾಯ ವಿದಾಯ
ವಿದಾಯಗಳು ನಿಮಗೆ || ಪ ||

ರಂಗದಿ ಮೆರೆದಿರಿ
ರಂಗವ ಮೆರೆಯಿಸದಿರಿ
ರಂಗವ ಬೆಳೆಯಿಸಿದಿರಿ ನೀವು || ೧ ||

ಹಗಲಿನ ಸೂರ್ಯ
ರಾತ್ರಿ ಉದಯಿಸಿದಂತೆ
ನೀವು ರಂಗಕ್ಕೆ ಬಂದ ಆ ಕ್ಷಣ || ೨ ||

ಸಿಡಿಲು ಗುಡುಗಿನ ಹೂಂ ಕಾರ
ರಂಗದಿ ನಟಿಸಿದ
ನಿಮ್ಮ ಪಾತ್ರಗಳ ಝೆಂಕಾರ || ೩ ||

ರಂಗದ ರಾಜ
ನಟ ಸಾರ್ವಭೌಮ
ಹೇಗೆ  ಬಣ್ಣಿಯಿಸಿದರು ಸಾಲದು ನಿಮ್ಮ ||೪||

ಕುಣಿದರು ನಲಿದರು
ತಣಿಯದ ಮೋಹ
ಎಂದೂ ದಣಿವರಿಯದ ದೇಹ || ೫||

ಇಂದು ಎಂದೂ ಮುಂದೆಂದೂ
ಕೇಳಿಸದು ಅಜ್ಜನ
ಕಾಲಿನ ಗೆಜ್ಜೆಯ ನಾದ ।।೬।।


ಆ  ರಂಗದಿ ವೇಷವ ಧರಿಸಿ
ಆ ರಂಗನ ಮನವ ತಣಿಸಿ
ಯಕ್ಷಲೋಕಕೆ ಬೇಗನೆ ಮರಳಿ ।।೭।।
                           
                                                                                               ---ಬೆಳ್ಳಂದೂರು
                                                                                               ---೧೪/೧೦/೨೦೧೭

ರಂಗದ ರಾಜ


ಶುಕ್ರವಾರ, ಅಕ್ಟೋಬರ್ 13, 2017

ವಸಂತ ಗೀತೆ

ಮಾಮರದಿ ಕೋಗಿಲೆ ಹಾಡಲು 
ಮೊಗ್ಗೊಂದು ಹೂವಾಗಿ ಅರಳಲು 
ಬಂತು ವಸಂತ , ಬಂತು ವಸಂತ  ।।ಪ ।।

ತಂಗಾಳಿ ಮೆಲ್ಲನೆ ಸುಳಿದಾಡಲು 
ಭಲಿತ ಫಲಗಳು  ವೃಕ್ಷವ ತುಂಬಿರಲು 
ಪಕ್ಷಿ ಮೃಗಗಳು ಆನಂದದಿ ಮೈಮರೆಯುಲಿರಲು 
ಬಂತು ವಸಂತ , ಬಂತು ವಸಂತ  ।।೧ ।।

ಝರಿಯೊಂದು ತೆವಳುತ್ತ ಸಾಗುತ್ತಿರಲು 
ಕಾರ್ಮೋಡ ಕರಗಿ ಬಾನು ಶುಭ್ರವಾಗಲು 
ಉದುರಿದೆಲೆ ಚಿಗುರಿಮರ ಕಂಗೊಳಿಸುತಿರಲು 
ಬಂತು ವಸಂತ , ಬಂತು ವಸಂತ  ।೨ ।।

ಸಸ್ಯ ಕೋಟಿ ಜಗಕೆ ತಂಪಾ ನೀಯುತಿರಲು 
ಫಲ ಪುಷ್ಪಾ ಜಗದ ಹೃದಯ ತುಂಬಿರಲು 
ಪ್ರಕೃತಿಯು ಜಗಕೆ ಹಸಿರ ಹಾಸಿರಲು 
ಬಂತು ವಸಂತ , ಬಂತು ವಸಂತ  ।।೩ ।।

                                                                       
----೦೩/೦೮/೨೦೧೩
------ಕಬ್ಬನ್ ಪಾರ್ಕ್ 

 ವಸಂತ ಗೀತೆ





           

ಮತ್ತೆ ಅಸೆ

ಮತ್ತು ಬಂದಿದೆ ಇಂದು 
ಮತ್ತವಳ ಹೆಸರೇನು ಕೇಳಿ 
ಮತ್ತೆ ಸಿಗುವಳೇ ಆಕೆ 
ಒಲವಿನಾಕೆ  ।। ಪ  ।।

ಅಂದು ನಸು ಸಂಜೆ
ನಡೆದು ಹೋದಾಕೆ 
ಮತ್ತೆ ಕಾಣಲಿಲ್ಲ 
ರವಿ ತೇಜದ ಅವಳ ಮೊಗ ।।೧।।

ಅರಸಿ ನಡೆದಿದ್ದೆ 
ನಾನೆಷ್ಟೋ  ಬಾರಿ 
ಅವಳು ಸಿಗುವಳೆಂದು 
ನೂರೊಂದು ಬಾರಿ  ।।೨।।

ಕಂಡಿದ್ದೆ  ಕೊನೆಯ ಬಾರಿ 
ನಗುವ ಕೆಂದುಟಿಯನ್ನ 
ಕೋಮಲ ವಿಮಲ 
ಮುಂದುರುಳು ನಗುವನ್ನು ।।೩।।

ಇಂದು ಯಾರೋ ಹೇಳಿದರು 
ಕರಾವಳಿಯ ಜಡಿ ಮಳೆಯಲ್ಲಿ 
ಬಸ್ಸಿಗೆ ಕಾಯುತ್ತಾ ನಿಂತಿದ್ದಳು 
ಕಂದಮ್ಮನ ಹಿಡಿದಿದ್ದಳು ಕೈಯಲ್ಲಿ  ಎಂದು ।।೪।।

                                                                                -೧೭-೦೭-೨೦೧೪
                                                                                -ಕಳ್ತೂರು -ಸುಳ್ಳಿ 

 ಮತ್ತೆ ಅಸೆ 

ಭಾನುವಾರ, ಅಕ್ಟೋಬರ್ 8, 2017

ಯಕ್ಷ ಕೋಗಿಲೆ

ಹಾಡುವ ಕೋಗಿಲೆಯನ್ನು 
ಬಿಡದೆ ಕಾಡಿತ್ತು  ಕಾಲ 
ಬಿಡದೆ ಕಾಡಿತ್ತು ।।ಪ ।।

ಅರಳಿ ಮಕರಂಧವ 
ಸೂಸುವ ಮುನ್ನವೇ 
ಜಾರಿ ಮರೆಯಾಗಿತ್ತು ।। ಅ ಪ ।।

ರಾಗದ ಇಂಪಿಗೆ 
ತಂಪಿನ ರಾತ್ರಿ 
ಕಂಪನು ಸೂಸುತಿತ್ತು ।।೧।।

  ಸವಿಯುವ ಮೈಮನ 
ತುಂಬಿರೆ  ಮನದಲ್ಲಿ 
ಮೈಲುಗಳೇ ಸಾಗುತಿತ್ತು ।।೨।।

ಕೀರ್ತಿ ಪತಾಕೆ ಹಾರಿಸಿದ 
ರಾಗವ ಸವಿದು ದಣಿದ 
ಮನವು ಕುಣಿಯುತಿತ್ತು ।।೩।।

ರಸಿಕರ ಬಾರ್ಗವ 
ನೂರ್ಕಾಲ ಬಾಳೆಂದು 
ಕರಾವಳಿ ಆಶೀರ್ವದಿಸುತಿತ್ತು ।।೪।।

ಭಾವಕರ ಮನವ 
ಕಂಪಿಸಿದ ದೇಹ 
ಅಂದು ಮಾತ್ರ ತಂಪಾಗಿತ್ತು ।।೫।।

ರಸಿಕರ ಲೋಕಕೆ 
ಬೇಗನೆ ಮರಳಿ 
ಬರುವೆ ಎಂದು ಸಾಗಿತ್ತು ।।೬।।

                                                                                --೨೮/೦೮/೧೪
                                                                                -- ಶೇಷಾದ್ರಿಪುರ

 ಯಕ್ಷ ಕೋಗಿಲೆ 

ಒಂಟಿ ಜೀವನ

                                   


ಒಂಟಿಯಾದೆನಲ್ಲೋ  ಮನಸೇ 
ಒಂಟಿಮಾಡಿದೆಯಲ್ಲೋ  ಕನಸೇ  ।।ಪ ।।

ಅನ್ಯರು ಗೈದುದೆಲ್ಲಾ ತಪ್ಪು 
ಎಂದು ಜರಿಯುತಿದ್ದ ಮನಸ್ಸು 
ತನ್ನ ತಪ್ಪನ್ನು ಅರಿವಾ ಮುಂಚೆ
ಒಂಟಿ ಮಾಡಿದೆಯಾ ।।೧।।

ಜಗವ ತಿಳಿದಿರ್ಪ  ನಾ ಒಬ್ಬನೇ 
ಅನ್ಯರು ಏನು ತಿಳಿಯದ ಮೂಢರೆಂಬ 
ಅಹಂಕಾರವ ತುಂಬಿಸಿ ಎನ್ನ 
ಒಂಟಿ ಮಾಡಿದೆಯಾ ।।೨।।

ದೂರ್ತನೆಂದು ಅನ್ಯರು ಗ್ರಹಿಸಿ 
ದೂರವಿರುವುದೇ ಲೇಸೆಂದು ಬಯಸಿ  
ತೊರೆದು ದೂರ ಸಾಗಿ ಹೋದರು 
ಯನ್ನ ಒಂಟಿ ಮಾಡಿ ಜನರು ।।೩।।

ಪರಮ ಪಾವನ ಜನ್ಮವ 
ನಲಿದು ಹರುಷದಿ ಕಳೆಯದೆ 
ಪರಮ ಪಾವನ ಜಗದ್ಹಾಂಬೆಯ 
ಪಾದವ ಸೇರುವ ಮುಂಚೆ ಒಂಟಿಯಾದೆ ನಾ ।।೪।।

                                                                               -- ೨೩/೦೪/೨೦೧೪
                                                                                 --  ಶೇಷಾದ್ರಿಪುರ 



ಮನದಿ ಮೂಡಿದ

                                

ಒಂದು ದಿನ
ಕವಿಯ ಮನದಿ
ಮೂಡಿತು ಒಂದು ಕವನ ।।ಪ ।।

ಮೈ ಮನ ತಲ್ಲಣ
ಆದ ಕವಿಯು ಒಂದು ಕ್ಷಣ ।।ಅ .ಪ ।।

ಕಾರ್ಮೋಡ ತುಂಬಿದ ಅಂಬರ
ಅದು ಕವಿತೆಯ ಹಂದರ
ಚೆಲುವಿನ ಚೆಂದದ ಪ್ರಕೃತಿ
ಅದು ಕವಿತೆಗೆ ಸುಂದರ ಆಕೃತಿ ।।೧।।

ಹುಣ್ಣಿಮೆಯ ಚಂದ್ರನ ತಂಪು
ತುಂಬಿತು ಕವನಕೆ ತಂಪು
ಪ್ರಾಣಿ ಪಕ್ಷಿಗಳ ಆಟ
ತುಂಬಿತು ಕವನಕೆ ಸಂಗೀತ ।।೨।।

ನೀರಿನ ಜುಳು ಜುಳು ನಾದ
ನೀಡಿತು ಕವನಕೆ ಮೋದ
ಮರಗಿಡಗಳ  ಹಸಿರು
ನೀಡಿತು ಕವನಕೆ ಉಸಿರು ।।೩।।

ಕಾಣುವ  ಸ್ರಷ್ಠಿಯ  ಮಾಟ
ನಡುವೆ ಮಾನವನ ಓಟ
ಅರ್ಥವಾಗದ ಗುಪ್ತ ಈ ಭುವನ
ಧನ್ಯ ಅರಿತು  ಬರೆದರೆ ಕವಿಯ ಜೀವನ ।।೪।।

                                                                                 --೦೬/೦೮/೧೩
                                                                                --ಕಬ್ಬನ್ ಪಾರ್ಕ್