Translate

ಶನಿವಾರ, ಮಾರ್ಚ್ 3, 2018

ಮಂದಾರ್ತಿ ಕ್ಷೇತ್ರ ಮಹಾತ್ಮೆ

ಮಂದಾರ್ತಿ ಕ್ಷೇತ್ರ ಮಹಾತ್ಮೆಯ ಸಾರಾಂಶ:




    ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ, ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಹ್ಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ, ಪರಮೇಶ್ವರನನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕದ ಸಹ್ಯಾದ್ರಿ ಪರ್ವತದ ಬಳಿ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘೃಪಾದ ಮಹರ್ಷಿಗಳು ಸಹ್ಯಾದ್ರಿ ಪರ್ವತದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಭರಭರ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಸೀಮಿತವಾಗಿರುವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ,ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮೆರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗುವಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ, ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ಮಂದರತಿಯೆಂಬ ನಾಗ ಸರ್ಪವು ಸೇರಿದ ಜಾಗವೇ ಮಂದರತಿ ಕಾನನವೆಂಬ (ಮಂದಾರ್ತಿ ) ಹೆಸರಾಯಿತು.

    ಕಾಲಾನಂತರದಲ್ಲಿ ಆ ನಾಗ ಕನ್ಯೆಯರು ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೇಮಾದ್ರಿಯ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯನ್ನು ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ, ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು ದಾರೆಯೆರೆಯುತ್ತಾನೆ.

     ವ್ಯಾಘ್ರಪಾದ ಮುನಿ ಮತ್ತು ತಾಮಸ ಗುಣದ ಕಿರಾತ ತರುಣಿ ಮಾಲಿನಿಯೊಂದಿಗಿನ ಸಂಪರ್ಕದ, ಅಕಾಲಿಕ ಗರ್ಬೋತ್ಪತ್ತಿಯಿಂದ ಜನಿಸಿದ ಮಹಿಷನು, ದೇವವರ್ಮ ಮಹಾರಾಜನ ಪತ್ನಿ ಜಲಜಾಕ್ಷಿಯನ್ನು ಕಂಡು ಆಕೆಯ ರೂಪಲಾವಣ್ಯಕ್ಕೆ ಮನಸೋತು, ತನ್ನ ಮನೋಭಿಲಾಶೆಯನ್ನು ತಿರಸ್ಕರಿಸಿದ ಆಕೆಯನ್ನು ಬಲಾತ್ಕರಿಸಲು ಮುಂದಾದಾಗ ರಕ್ಕಸನಿಂದ ತಪ್ಪಿಸಿಕೊಂಡು ಅರಮನೆ ಸೇರುತ್ತಾಳೆ. ನಂತರ ಆ ರಾಜ ದಂಪತಿಗಳು ಮಂದಾರ್ತಿ ಕಾನನದಲ್ಲಿ ನೆಲೆಸಿದ್ದ ಸುದೇವ ಮುನಿಯ ಆಶ್ರಯದಲ್ಲಿದ್ದಾಗ, ಮಹಿಷನ ಅಣತಿಯಂತೆ, ಮಹೋಧರ ರಕ್ಕಸನು ಮುನಿಯ ಮೇಲೆ ಶರಪ್ರಯೋಗಿಸತೊಡಗುತ್ತಾನೆ. ಆಗ ಮುನಿಯ ದೇವಿಯನ್ನು ಸ್ತುತಿಸಿದಾಗ ರಕ್ಕಸನೆದುರು ಬೃಹದಾಕಾರದ ಹುತ್ತವೊಂದು ಎದ್ದು ನಿಲ್ಲುತ್ತದೆ. ರಕ್ಕಸನ ಎಲ್ಲ ಅಸ್ತ್ರಗಳು ಹುತ್ತದಲ್ಲಿ ಮಾಯವಾಗುತ್ತವೆ. ರಾಜದಂಪತಿಗಳ ಪ್ರಾರ್ಥನೆಯಂತೆ ದೇವಿಯು ವೀರಭದ್ರ, ಹಾಯ್ಗುಳಿ, ಕಲ್ಲುಕುಟಿಗ ಮತ್ತು ಬೊಬ್ಬಾರ್ಯರ ಸಹಾಯದಿಂದ ಎಲ್ಲ ರಕ್ಕಸರ ಸಂಹಾರ ಮಾಡಿದಳು.

     ನಂತರ ಮಹಿಷನು, ಸ್ವತಹ ಯುದ್ದಕ್ಕೆ ಮುಂದಾಗಿ ತಾನು ಎಸೆದ ಅಸ್ತ್ರಗಳು ಕೂಡಾ ಮಾಯವಾಗಿ ಅವನ ಕಣ್ಣಿಗೆ ಒಮ್ಮೆ ಹುತ್ತವೂ ಮತ್ತೊಮ್ಮೆ ಅಷ್ಟಭುಜಾಂಕಿತೆಯಾದ ದುರ್ಗಾಮಾತೆಯು ಕಾಣಲು, ಅವನಿಗೆ ಜ್ಞಾನೋದಯವಾಗುತ್ತದೆ. ಮಹಿಷನು ದೇವಿಗೆ ಶರಣಾಗಿ , ತಾನು ಭೂಲೋಕದಲ್ಲಿ ಜನಿಸಿದ ಕುರುವಾಗಿ ಸಹ್ಯಾದ್ರಿಯಲ್ಲಿ ತನ್ನನ್ನು ಪೂಜಿಸುವಂತೆ ಮತ್ತು ನಿನ್ನ ಕ್ಷೇತ್ರದಲ್ಲಿ ಪ್ರತಿವರ್ಷ ಕೆಂಡಸೇವೆ ನಡೆಸುವಂತೆಯೂ, ಹಾಗೆ ಕೆಂಡ ಸೇವೆ ನಡೆಸಿದ ಸುಮಂಗಲೆಯವರ ಇಷ್ಟಾರ್ಥ ನೆರವೇರಿಸುವಂತೆ ಅನುಗ್ರಹಿಸಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿ, ಮಹಿಷನು ತನ್ನ ಜೀವ ಪುಷ್ಪವನ್ನು ದೇವಿಯ ಪಾದಕ್ಕೆ ಸಮರ್ಪಿಸುತ್ತಾನೆ.


        ಸುದೇವ ಮುನಿ ಮತ್ತು ದೇವವರ್ಮ ರಾಜದಂಪತಿಗಳು ದೇವಿಯನ್ನು ವಿಧವಿಧವಾಗಿ ಸ್ತುತಿಸಿ, ಪೂಜಿಸಿ ಹರಿವಾಣದಲ್ಲಿ ನೈವೇದ್ಯವನ್ನು ಅರ್ಪಿಸಿದರು. ದೇವಿಯು ಪ್ರಸನ್ನಚಿತ್ತಳಾಗಿ ಇಂದಿನಿಂದ ತಾನಿಲ್ಲಿ “ ದುರ್ಗಾಪರಮೇಶ್ವರಿ” ಎಂಬ ಹೆಸರಿನಿಂದ ನೆಲೆಸಿ ತನ್ನನ್ನು ಭಕ್ತಿಯಿಂದ ಆರಾಧಿಸುವವರ ಸಕಲ ದುರಿತಗಳನ್ನು ನಿವಾರಿಸಿ, ಅವರ ಸಕಲಾಭೀಷ್ಟ ಸಿದ್ದಿಸುವುದೆಂದು ವರವನ್ನಿತ್ತಳು.

      ದೇವವರ್ಮರಾಜನು ಈ ಹಿಂದೆ ಸ್ವಷ್ನದಲ್ಲಿ ಸುಬ್ರಹ್ಮಣ್ಯನು ತಿಳಿಸಿದಂತೆ ವಾರಾಹಿ ನದಿಯಲ್ಲಿದ್ದ ಶ್ರೀ ದುರ್ಗಾಪರಮೇಶ್ವರಿ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿದನು.

ಮಂದಾರ್ತಿ ಕ್ಷೇತ್ರ ಮಹಾತ್ಮೆ ವೀಡಿಯೊ ನೋಡಲು ಕೆಳಗಿನ  ಲಿಂಕ್ ಒತ್ತಿರಿ

Mandarthi Kshethra Mahatme Full Yakshagana



ದೇವಸ್ಥಾನಕ್ಕೆ ಬರುವುದಕ್ಕೆ ದಾರಿ ಕೆಳಗಡೆ ಇದೆ ನೋಡಿ ...